ಅರ್ಜುನಾಯನರು	
ಸು. ಕ್ರಿ. ಶ. 200-400ರ ವರೆಗೆ ಅಸ್ತಿತ್ವದಲ್ಲಿದ್ದ ಒಂದು ಜನಾಂಗ. ಬೃಹತ್‍ಸಂಹಿತೆಯ ಕರ್ತೃವಾದ ವರಾಹಮಿಹಿರ, ಇವರು ಉತ್ತರ ಭಾರತದವರೆಂದು ಹೇಳುತ್ತಾನೆ. ಟಾಲೆಮಿ ಹೆಸರಿಸುವ, ಪಂಜಾಬಿನ ಪಂಡೂನೋಯಿ ಜನಾಂಗವೇ ಇವರು ಎಂಬ ಒಂದು ಅಭಿಪ್ರಾಯವಿದೆ. ಪಾಂಡವ ಅರ್ಜುನ ಇವರ ಮೂಲಪುರುಷನಾಗಿದ್ದು ಅವನಿಂದಲೇ ಇವರಿಗೆ ಅರ್ಜುನಾಯನ ಎಂಬ ಹೆಸರು ಬಂತೆಂದು ಕೆಲವರು ಭಾವಿಸಿದರೆ, ಹೈಹಯವಂಶದ ಕಾರ್ತವೀರ್ಯ ಅರ್ಜುನನಿಂದ ಇವರಿಗೆ ಈ ಹೆಸರು ಬಂತೆಂದು ಇನ್ನು ಕೆಲವರು ತರ್ಕಿಸುತ್ತಾರೆ. ಸಮುದ್ರಗುಪ್ತನ ಅಲಹಾಬಾದ್ ಶಾಸನದಲ್ಲಿ, ಅರ್ಜುನಾಯನರು ಅವನಿಗೆ ವಿಧೇಯರಾಗಿದ್ದರೆಂದು ಹೇಳಿದೆ. ಇದು ಅರ್ಜುನಾಯನ ಪೂರ್ವದ ಕಲಚುರಿ ಅರಸರಿಗೆ, ಸಂಬಂಧಿಸಿದ್ದೆಂದು ಫ್ಲೀಟ್‍ನ ಅಭಿಪ್ರಾಯ.

ಅರ್ಜುನಾಯನ ಜನಾಂಗ ಪ್ರಾಚೀನ ಗಣರಾಜ್ಯಗಳಲ್ಲಿ ಒಂದಾಗಿತ್ತು. ಆಳ್ವಿಕೆ ಅರಸನಿಂದ ನಡೆಯದೆ ಜನರ ಪ್ರತಿನಿಧಿಗಳಿಂದ ನಡೆಯುತ್ತಿತ್ತು. ಇವರ ಸುಮಾರು ಕ್ರಿ . ಪೂ. 100ರ ಕೆಲವು ನಾಣ್ಯಗಳು ಮಥುರಾ ವಿಭಾಗದಲ್ಲಿ ದೊರಕಿದ್ದು ಅವುಗಳಲ್ಲಿ ಅರ್ಜುನಾಯನಾನಾಂ ಜಯಃ ಎಂದಿದೆ. ಅರ್ಜುನಾಯನರು ಇಂದಿನ ಆಗ್ರಾ-ಜಯಪುರ ಪ್ರದೇಶದಲ್ಲಿದ್ದರೆಂದು ತಿಳಿಯಲಾಗಿದೆ. ಈ ಪ್ರದೇಶದ ಉತ್ತರಕ್ಕೆ ಯೌಧೇಯ ಎಂಬ ಇನ್ನೊಂದು ಜನಾಂಗವಿತ್ತು. ಇವರದೂ ಗಣರಾಜ್ಯವೇ. ಎರಡೂ ಜನಾಂಗಗಳು ಕುಶಾನರ ಸತ್ತೆಯನ್ನು ಪ್ರತಿಭಟಿಸಿ ಸ್ವತಂತ್ರವಾದವೆಂದು ತೋರುತ್ತದೆ. ಈ ಎರಡೂ ಗಣರಾಜ್ಯಗಳು ಸಮುದ್ರಗುಪ್ತನ ಅಧೀನವಾದವೆಂದು ಅಲಹಾಬಾದಿನ ಶಾಸನದಿಂದ ಖಚಿತವಾಗಿ ತಿಳಿದುಬರುತ್ತವೆ.
        
(ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ